About Shri Vaishnava Sangha
ಈ ಸಂಘದ ಮೂಲ ಉದ್ದೇಶ ಗ್ರಾಮಾಂತರ ಪ್ರದೇಶದ ಬಡ ವಿದ್ಯಾರ್ಥಿಗಳ ಉನ್ನತ ವಿದ್ಯಾಭ್ಯಾಸಕ್ಕೆ ನೆರವು ನೀಡುವುದು. ಗ್ರಾಮಾಂತರ ಬಡಜನತೆ ಕಷ್ಟಕಾರ್ಪಣ್ಯಗಳಿಂದ ಜೀವನ ಸಾಗಿಸುತ್ತಾ ಇರುವುದರಿಂದ ಅವರ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಸಾಧ್ಯವಾಗದ ಪರಿಸ್ಥಿತಿಯನ್ನು ಮನಗಂಡು ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಉಚಿತ ಊಟ ವಸತಿಯನ್ನು ಏರ್ಪಡಿಸುವುದು. ಶ್ರೀವೈಷ್ಣವ ಸಂಘವು ಇದಕ್ಕಾಗಿ ಸತತವಾಗಿ ಶ್ರಮಿಸುತ್ತಿರುವ ವಿಚಾರ ನಿಮ್ಮೆಲ್ಲರಿಗೂ ತಿಳಿದ ವಿಷಯವಾಗಿರುತ್ತದೆ. ಈ ಮಹತ್ಕಾರ್ಯಕ್ಕೆ ಹಿತೈಷಿಗಳು ಸಹಾಯಾಕಾಂಕ್ಷಿಗಳು ನಮ್ಮೊಡನೆ ಸಹಕರಿಸುತ್ತಿರುವ ಕಾರಣ ಈ ಸಂಘವು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಹೊಂದಲು ಕಾರಣವಾಗಿರುತ್ತದೆ. ಇದರ ಜೊತೆಗೆ ಶ್ರೀವೈಷ್ಣವ ಸಮಾಜದಲ್ಲಿ ಆರ್ಥಿಕ ನೈತಿಕ ಸಾಮಾಜಿಕ ಸಾಂಪ್ರದಾಯಿಕ ಮಟ್ಟವನ್ನು ಹೆಚ್ಚಿಸುವುದು ಸಂಘದ ಮೂಲ ಉದ್ದೇಶವಾಗಿರುತ್ತದೆ.
ಶ್ರೀ ವಿಷ್ಣುಚಿತ್ತ ವಿದ್ಯಾರ್ಥಿ ನಿಲಯ
ಗ್ರಾಮಾಂತರ ಪ್ರದೇಶದ ಬಂಧುಗಳು ಮತ್ತು ಬಂದಂತಹ ಬಡ ವಿದ್ಯಾರ್ಥಿಗಳಿಗೆ ಪಾಂಚರಾತ್ರಾಗಮ, ಪದವಿ, ಪದವಿ ಪೂರ್ವ, ಸ್ನಾತಕೋತ್ತರ, ತಾಂತ್ರಿಕಪದವಿ, ಐಟಿಐ ಮತ್ತು ಡಿಪ್ಲೋಮೋ ವ್ಯಾಸಂಗವನ್ನು ಮುಂದುವರಿಸಲು ವಿದ್ಯಾರ್ಥಿಗಳ ಉಚಿತ ಊಟ ಮತ್ತು ವಸತಿ ಸೌಕರ್ಯಕ್ಕಾಗಿ ಶ್ರೀವೈಷ್ಣವ ಸಂಘದ ವತಿಯಿಂದ ಶ್ರೀ ವಿಷ್ಣು ಚಿತ್ತವಿದ್ಯಾರ್ಥಿ ನಿಲಯವನ್ನು 1989ನೇ ಇಸವಿ ಜುಲೈ ತಿಂಗಳಲ್ಲಿ ಪ್ರಾರಂಭಿಸಲಾಯಿತು.
ಸಂಘದ ಈ ಕಾರ್ಯಕ್ಕಾಗಿ ಸಮಿತಿ ಸದಸ್ಯರು ಹಾಗೂ ಪದಾಧಿಕಾರಿಗಳು, ವಿದ್ಯಾರ್ಥಿಗಳಿಗೆ ಬೇಕಾಗುವ ಊಟ ವಸತಿ ಮತ್ತು ಸೌಕರ್ಯಗಳ ನಿರ್ವಹಣೆಗೆ ಬೇಕಾಗುವ ಸಂಪನ್ಮೂಲಗಳನ್ನು ಒದಗಿಸಲು ಕಂಕಣಬದ್ಧರಾಗಿ ದುಡಿಯುತ್ತಿದ್ದಾರೆ. ಪಾಂಚರಾತ್ರಾಗಮ ವಿದ್ಯಾರ್ಥಿಗಳ ಕ್ರಮಬದ್ಧ ವ್ಯಾಸಂಗಕ್ಕಾಗಿ ಪಾಂಚರಾತ್ರಾಗಮ, ಸಾಹಿತ್ಯ, ವೇದ, ಸ್ತೋತ್ರಗಳು, ಸೂಕ್ತಗಳು, ಜ್ಯೋತಿಷ್ಯ ಶಾಸ್ತ್ರ, ಹಾಗೂ ನಿತ್ಯಾನುಸಂಧಾನಗಳಿಗೆ ಬೇರೆ ಬೇರೆ ಅಧ್ಯಾಪಕರುಗಳನ್ನು ನೇಮಕ ಮಾಡಲಾಗಿದೆ. ಶಾಲೆಯಲ್ಲಿ ಪ್ರತಿವರ್ಷ ಪರೀಕ್ಷೆಗಳಲ್ಲಿ ಉತ್ತಮ ಪಲಿತಾಂಶ ಬರುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಿದ್ದಾರೆ.
ನಮ್ಮ ವಿಷ್ಣು ಚಿತ್ತ ವಿದ್ಯಾರ್ಥಿ ನಿಲಯದಿಂದ ಪಾಂಚರಾತ್ರಾಗಮ ವಿದ್ಯಾಭ್ಯಾಸವನ್ನು ಯಶಸ್ವಿಯಾಗಿ ಪೂರೈಸಿಕೊಂಡು ಹೋಗಿರುವ ವಿದ್ಯಾರ್ಥಿಗಳು ನಮ್ಮ ನಾಡಿನಲ್ಲೇ ಅಲ್ಲದೆ ವಿದೇಶಗಳಲ್ಲಿಯೂ ಸಹ ಸೇವೆ ಸಲ್ಲಿಸುತ್ತಿರುವ ವಿಷಯವನ್ನು ತಿಳಿಸಲು ಹರ್ಷ ಪಡುತ್ತೇವೆ.
2022.2023 ನೇ ಸಾಲಿನಲ್ಲಿ 35 ಮಂದಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿ ಅವರಿಗೆ ಉಚಿತ ಊಟ, ವಸತಿ ಮತ್ತು ಮಾರ್ಗದರ್ಶನ ನೀಡಲಾಗಿತ್ತು. ಅವರ ಪೈಕಿ 4 ಮಂದಿ ಶೈಕ್ಷಣಿಕ ವಿದ್ಯಾಭ್ಯಾಸವನ್ನು ಮಾಡುವವರಾಗಿದ್ದರು 31 ಮಂದಿ ಪಾಂಚರಾತ್ರಾಗಮ ವಿದ್ಯಾಭ್ಯಾಸವನ್ನು ಮಾಡುವವರಾಗಿದ್ದರು.
ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನ:
ವಿದ್ಯಾರ್ಥಿನಿಯರಿಗೆ ಶಿಕ್ಷಣಕ್ಕಾಗಿ ಪ್ರೋತ್ಸಾಹ ನೀಡಲು 2002ನೇ ಸಾಲಿನಿಂದಲೂ ವಿದ್ಯಾರ್ಥಿವೇತನವನ್ನು ನೀಡುತ್ತಾ ಬಂದಿರುವುದು ತಮಗೆಲ್ಲ ವೇದ್ಯವಾಗಿದೆ. ಈ ಒಂದು ಮೂಲಧನ ರೂ 25 ಲಕ್ಷ ಸೃಜಿಸಿ ಅದರಿಂದ ಬರುವ ಬಡ್ಡಿಯಿಂದ ಪ್ರತಿ ವರ್ಷವೂ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನವನ್ನು ಕೊಡಲು ನಿರ್ಧರಿಸಲಾಗಿತ್ತು. ಅದರಂತೆ ಮೂಲ ಧನ ರೂ 21.23 ಲಕ್ಷ ಸೃಷ್ಟಿಯಾಗಿದೆ. ಇದರ ಜೊತೆಗೆ ಸಂಘ ಸಂಸ್ಥೆ ಹಿತೈಷಿಗಳಿಂದ ಬಂದು ಮಿತ್ರರಿಂದ ಹಾಗೂ ಸಂಘದ ಸದಸ್ಯರುಗಳಿಂದ ವಂತಿಕೆಗಳನ್ನು ಪಡೆದು ವಿದ್ಯಾರ್ಥಿ ವೇತನವನ್ನು ವಿತರಣೆ ಮಾಡಲಾಗುತ್ತಿದೆ.
ಗ್ರಂಥಾಲಯ:
ತಾ|| 3.12.2000 ದಂದು “ಶ್ರೀ ಯತಿರಾಜ ದ್ವಿರೇಪ ಟ್ರಸ್ಟ್”, ಮೈಸೂರು ಇವರ ವಂತಿಕೆಯಿಂದ ಗ್ರಂಥಾಲಯವನ್ನು ನಿರ್ಮಿಸಲಾಯಿತು. ವಿದ್ಯಾರ್ಥಿಗಳ ಮನೋವಿಕಾಸಕ್ಕೆ ಎಡೆ ಮಾಡಿಕೊಡುವ ಅವರ ವಿಶೇಷ ಅಧ್ಯಯನಕ್ಕೆ ಇಂದು ಕೊಡುವ ಹಲವಾರು ಗ್ರಂಥಗಳು ಬರಹ ಪುಸ್ತಕಗಳನ್ನು ಎರವಲು ಪಡೆಯಲಾಯಿತು. ಹಿತೈಷಿಗಳು ಸಹಕರಿಸಿ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಕ್ರೂಢೀಕರಿಸಿರುತ್ತಾರೆ. ವಾರ್ತಾ ಪತ್ರಿಕೆ ಮತ್ತು ನಿಯತಕಾಲಕಿಗಳನ್ನು ಒದಗಿಸಿ ಬಿಡುವಿನ ವೇಳೆಯಲ್ಲಿ ಅಧಿಕ ಜ್ಞಾನಾರ್ಜನೆಗೆ ಅನುಕೂಲ ಮಾಡಲಾಗಿದೆ.
ಶ್ರೀ ವಿಷ್ಣುಚಿತ್ತ ವಿದ್ಯಾರ್ಥಿಲಯದ ಬೇಸಿಗೆ ಶಿಬಿರವನ್ನುಹಮ್ಮಿಕೊಳ್ಳಲಾಗಿತ್ತು:
ಬೇಸಿಗೆ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಾoಶುಪಾಲರಾದ ಬಾಲಾಜಿ ಅವರು ತಮ್ಮ ಯಥಾ ಶಕ್ತಿ ಸೇವೆ ಸಲ್ಲಿಸಿ ಶಿಬಿರವನ್ನು ಯಶಸ್ವಿಯಾಗಿ ಪೂರೈಸಲು ಸಹಾಯ ಮಾಡಿರುತ್ತಾರೆ. ಸುಮಾರು 15 ವಿದ್ಯಾರ್ಥಿಗಳು ಶಿಬಿರಕ್ಕೆ ಬಂದು ಸ್ತೋತ್ರಗಳನ್ನು ಕಲಿತು ಸಂಸ್ಕಾರವನ್ನು ಬೆಳೆಸಿಕೊಂಡಿರುತ್ತಾರೆ.
ಶ್ರೀ ವೈಷ್ಣವ ಸಂಘದ ಸಂಪತ್ತು :
ಮಹಾ ಪೋಷಕರು 11
ಪೋಷಕರು 3
ಅಜೀವ ಸದಸ್ಯರು 793
ಶ್ರಾದ್ಧ ಭವನ:
ಅಂತೇಷ್ಠಿ, ಪ್ರಥಮಕಾರ್ಯಗಳಪೂರ್ವಕ ಸಪಿಂಡೀಕರಣ , ಆಬ್ಧಿಕಾ ಪ್ರತ್ಯಾಬ್ಧಿಕ, ಪರಮಪದೋತ್ಸವ ಮುಂತಾದ ಪಿತೃಕಾರ್ಯಗಳನ್ನು ಶಾಸ್ತ್ರೋಕ್ತವಾದ ರೀತಿಯಲ್ಲಿ ನಡೆಸುತ್ತಿರುವುದರಿಂದ ತ್ರಿಮತಸ್ಥರು ಇದರ ಪ್ರಯೋಜನ ಪಡೆಯುತ್ತಿದ್ದಾರೆ.
ಶ್ರಾದ್ಧ ಭವನ:
ಸಂಘದ ಸದಸ್ಯರುಗಳಲ್ಲದೆ ಇತರ ಸಂಘ ಹಿತೈಷಿಗಳು ಮಿತ್ರರ ಮನವೊಲಿಸಿ ಅನ್ನದಾನ ಶಾಶ್ವತ ನಿಧಿಯನ್ನು ಅಭಿವೃದ್ಧಿಪಡಿಸುವುದು.
ಶ್ರೀವಿಷ್ಣುಚಿತ್ತ ವಿದ್ಯಾರ್ಥಿನಿಲಯದ ನಿರ್ವಹಣೆಗಾಗಿ ಸಂಪನ್ಮೂಲಗಳನ್ನು ವೃದ್ಧಿಗೊಳಿಸುವುದು.
ಖಾಲಿನಿವೇಶನದ ನ್ಯಾಯಾಲಯದ ಪ್ರಕರಣ ಸಂಘದ ಪರ ಇತ್ಯರ್ಥವಾಗಿರುವುದರಿಂದ ಆ ಜಾಗದಲ್ಲಿ ಕಟ್ಟಡ ನಿರ್ಮಿಸಲು ಯೋಜನೆ
ಆಜೀವ ಸದಸ್ಯರುಗಳನ್ನು ಹೆಚ್ಚಿಸುವಂತೆ ಮಾಡುವುದು
ಶ್ರೀ ವಾನಮಾಮಲೈನಲ್ಲಿ ಸಂಘದ ವತಿಯಿಂದ ಛತ್ರ ನಿರ್ಮಾಣ ಮಾಡುವುದು.
ಈ ಮೇಲ್ಕಂಡ ಸಂಘದ ಅಭಿಲಾಷೆಗಳನ್ನು ಸಫಲಗೊಳಿಸಲು ತಮ್ಮ ತನು ಮನ ಧನದಿಂದ ಉತ್ತೇಜಿಸಿ ಸಹಾಯ ಹಸ್ತವನ್ನು ನೀಡಿ ಸಹಕರಿಸುವಂತೆ ಮಾಡಲು, ಶ್ರೀವೈಷ್ಣವ ಸಂಘದ ಪರವಾಗಿ ನಿಮ್ಮೆಲ್ಲರಲ್ಲಿ ನನ್ನ ಸವಿನಯ ಪ್ರಾರ್ಥನೆ.